ತುಳುವರು -
1491 ರಿಂದ 1570 ರ ವರೆಗೆ ವಿಜಯನಗರವನ್ನು ಆಳಿದ ರಾಜವಂಶ, ಸಂಗಮ, ಸಾಳುವ ವಂಶಗಳ ಅನಂತರ ಆಳಿದ ತುಳುವರು ಸಾಳುವ ವಂಶದವರೇ ಆದರೂ ಅಲ್ಪಕಾಲ ಆಳಿದ (1485-1505) ಸಾಳುವ ನರಸಿಂಹನ ವಂಶಕ್ಕಿಂತ ತಾವು ಪ್ರತ್ಯೇಕವೆಂದೇ ತೋರಿಸಿಕೊಳ್ಳಲು ತಮ್ಮನ್ನು ತುಳುವರೆಂದು ಕರೆದುಕೊಂಡಿದ್ದಾರೆ. ಮೂಲತಃ ಕಿಷ್ಕಿಂಧೆಯವರೆಂದು ಹೇಳಿಕೊಂಡಿರುವ ಉತ್ತರ ಆರ್ಕಾಟಿನ ದೇವಿಕಾಪುರಮ್‍ನಲ್ಲಿ 2-3 ತಲೆಮಾರುಗಳಿಂದಲಾದರೂ ನೆಲೆಸಿದ್ದ ಈ ವಂಶದವರು ತಮ್ಮನ್ನು ತುಳುವರೆಂದು ಕರೆದುಕೊಂಡಿರುವುದರಿಂದ ಇವರು ಮೂಲತಃ ತಮಿಳುನಾಡಿನವರೇ ಇರಬೇಕು. ಬಹುಶಃ ಉತ್ತರ ಕನ್ನಡ ಜಿಲ್ಲೆಯ ಗೆರಸೊಪ್ಪೆ ಮತ್ತು ಹಾಡುವಳ್ಳಿಗಳಲ್ಲಿ (ಈ ಪ್ರದೇಶಗಳನ್ನು ತುಳುವ ಎಂದೇ ಶಾಸನಗಳಲ್ಲಿ ಕರೆದಿದೆ) ಆಳುತ್ತಿದ್ದ ಎರಡು ಸಾಳುವ ವಂಶಗಳಲ್ಲಿ ಒಂದಕ್ಕೆ ಇವರು ಸೇರಿರಬೇಕೆಂದು ತೋರುತ್ತದೆ. ತಮ್ಮ ಶಾಸನಗಳಲ್ಲಿ ತುಳುವರು ತಮ್ಮನ್ನು ಚಂದ್ರವಂಶದವರೆಂದೂ ಯಾದವ ಕುಲದವರೆಂದೂ ತುರುವಸು ತಮ್ಮ ಮೂಲ ಪುರುಷನೆಂದೂ ಹೇಳಿರುವರಾದರೂ ಇಂಥ ಹೇಳಿಕೆಗಳಲ್ಲಿ ಹುರುಳಿಲ್ಲ. ತಮ್ಮ ವಂಶದ ದಿಲೀಪ ಅಥವಾ ತಿಮ್ಮ ಎಂಬಾತ ಕಿಷ್ಕಿಂಧೆಯಿಂದ ಚಂದ್ರಗಿರಿಗೆ ಬಂದು ನೆಲೆ ನಿಂತನೆಂದು ಅವರ ಶಾಸನಗಳು ತಿಳಿಸಿದ್ದು ನಿಜವಿರಬೇಕು. ಚಂದ್ರಗಿರಿಯ ಸಾಳುವರ ಕೈಕೆಳಗೆ ಸೇನಾನಿಗಳಾಗಿದ್ದ ಇವರು ಮುಂದೆ ದೇವಿಕಾಪುರಮ್‍ನಲ್ಲಿ ಇದ್ದರು. ಈ ವಂಶದ ಈಶ್ವರ, ಸಾಳುವ ನರಸಿಂಹನ ಸೇನಾನಿಯಾಗಿದ್ದ. ಇವನು ನರಸಿಂಹನ ದಿಗ್ವಿಜಯಗಳಲ್ಲಿ ಪಾಲುಗೊಂಡವನು. ವರಾಹಪುರಾಣಮು ಎಂಬ ತೆಲಗು ಕೃತಿ ತಿಳಿಸುವಂತೆ, ಉದಯಗಿರಿ, ನೆಲ್ಲೂರು, ಅಮೂರು, ಶ್ರೀರಂಗಗಳನ್ನು ಗೆಲ್ಲಲು ನರಸಿಂಹನಿಗೆ ಈಶ್ವರ ನೆರವಾಗಿದ್ದ. ತೆಲುಗು ಜೈಮಿನೀಭಾರತ ಹೇಳುವಂತೆ, ಜಂಜೀ, ಕೊಯಮತ್ತೂರು ಪ್ರದೇಶ, ಕುಂದಾನಿ, ಶ್ರೀರಂಗಪಟ್ಟಣ, ನಾಗಮಂಗಲ, ಬೆಂಗಳೂರು, ಪೆನುಕೊಂಡಗಳನ್ನು ಆತ ನರಸಿಂಹನಿಗೆ ಗೆದ್ದುಕೊಟ್ಟಿದ್ದ. 1485 ರಲ್ಲಿ ವಿಜಯನಗರದ ರಾಜಧಾನಿಯನ್ನು ಅವನಿಗೆ ಗೆದ್ದುಕೊಟ್ಟವನು ಈಶ್ವರನಾಯಕನೇ. ಈಶ್ವರನ ಅನಂತರ ಸಾಳುವ ನರಸಿಂಹನ ಬಲಗೈ ಬಂಟನಾಗಿದ್ದ ಈಶ್ವರನ ಮಗ ನರಸನಾಯಕನೇ ಸಾಳುವ ನರಸಿಂಹನಿಂದ ತನ್ನ ಮರಣ ಕಾಲದಲ್ಲಿ ರಾಜರಕ್ಷಕನಾಗಿ ನೇಮಿಸಲ್ಪಟ್ಟ. ನರಸಿಂದ ತೀರಿಕೊಂಡಾಗ ಅವನ ಮಕ್ಕಳಾದ ತಿಮ್ಮ ಮತ್ತು ಇಮ್ಮಡಿ ನರಸಿಂಹನ ರಕ್ಷಣೆಯ ಭಾರ ನರಸನ ಮೇಲೆ ಬಿತ್ತು. ಆದರೆ ತಿಮ್ಮ ದಂಡನಾಯಕನೆಂಬ ನರಸನಾಯಕನ ಶತ್ರು ಒಬ್ಬ, ರಾಜ ತಿಮ್ಮನ್ನನ್ನು ಕೊಲೆಮಾಡಿದ. ಆಗ ನರಸಿಂಹನ ಕಿರಿಯ ಮಗ ಇಮ್ಮಡಿ ನರಸಿಂಹನಿಗೆ ಪಟ್ಟವಾಯಿತು. ಅವನು ತಿಮ್ಮ ದಂಡನಾಯಕನಿಗೆ ನಿಕಟವಾಗಿ, ನರಸನಾಯಕನನ್ನು ದ್ವೇಷಿಸಿದ; ತಿಮ್ಮ ದಂಡನಾಯಕ ನಡೆಸಿದ್ದ ಕೊಲೆಗಾಗಿ ಅವನನ್ನು ಶಿಕ್ಷಿಸಲು ಮುಂದಾಗಲಿಲ್ಲ. ಆಗ ನರಸನಾಯಕ ರಾಜಧಾನಿಯನ್ನು ತ್ಯಜಿಸಿ ಪೆನುಕೊಂಡೆಗೆ ಹೋಗಿ ಅಲ್ಲಿಂದ ಭಾರಿ ಸೇನೆಯೊಂದಿಗೆ ರಾಜಧಾನಿಯ ಮೇಲೆ ದಂಡೆತ್ತಿ ಬಂದ. ಇಮ್ಮಡಿ ನರಸಿಂಹ ಗಾಬರಿಗೊಂಡು, ತಿಮ್ಮ ದಂಡನಾಯಕನ ತಲೆಯನ್ನು ಕತ್ತರಿಸಿ ನರಸನಿಗೆ ಕಳುಹಿಸಿಕೊಟ್ಟ. ರಾಜಧಾನಿಗೆ ಶಾಂತಿಯಿಂದ ನರಸ ಮರಳಿ, ರಾಜಕಾರ್ಯ ನಿರ್ವಹಿಸಿದ. ಇಮ್ಮಡಿ ನರಸಿಂಹ ಹೆಸರಿಗೆ ಮಾತ್ರ ರಾಜನಾಗಿ ಉಳಿದ. ಆತನನ್ನು ಪೆನುಕೊಂಡೆಯಲ್ಲಿ ದಿಗ್ಬಂಧನದಲ್ಲಿ ಇಡಲಾಗಿತ್ತು.

ಬಿಜಾಪುರದ ಕೈಸೇರಿದ್ದ ಮುದುಗಲ್ಲಿ, ರಾಯಚೂರುಗಳನ್ನು ಗೆದ್ದುಕೊಂಡರು, ಪೆನ್ನಾರ್ ವರೆಗೆ ದಂಡೆತ್ತಿ ಬಂದ ಪ್ರತಾಪರುದ್ರ ಗಜಪತಿಯನ್ನು ಹಿಂದಕ್ಕಟ್ಟಿದ್ದು ಚೋಳ, ಚೇರ, ಪಾಂಡ್ಯ ಪ್ರದೇಶಗಳ ಬಂಡಾಯವನ್ನು ಸದೆಬಡಿದದ್ದು- ಇವು ನರಸನ ಗಣ್ಯಸಾಧನೆಗಳು. ಮಧುರೆಯನ್ನು ಗೆದ್ದು ರಾಮೇಶ್ವರಂ ವರೆಗೆ ಅವನು ವಿಜಯಯಾತ್ರೆ ನಡೆಸಿದ. ವಿಜಯನಗರದ ವಿರುದ್ಧ ಸದಾ ಬಂಡೇಳುತ್ತಿದ್ದ ಗೆರೆಸೊಪ್ಪೆಯ ಸಾಳುವರು ನರಸನಾಯಕನ ಬಗ್ಗೆ ಮಾತ್ರ ಅಭಿಮಾನ ತಳೆದು, 1502 ರಲ್ಲಿ ಧಾರೇಶ್ವರದ ದೆವರಿಗೆ ಅವನ ಪುಣ್ಯಾರ್ಥ ದಾನ ನೀಡಿದ್ದು ಬಹುಶಃ ನರಸನನ್ನು ತಮ್ಮವನೆಂದು ಭಾವಿಸಿದ್ದರಿಂದಲೇ ಇರಬೇಕು. 1503 ರಲ್ಲಿ ನರಸ ತೀರಿಕೊಂಡಾಗ ಅವನ ಮಗ (ರಾಣಿ ತಿಪ್ಪಾಜಿಯಿಂದ) ಭುಜಬಲ ನರಸಿಂಹನಿಗೆ ಪಟ್ಟವಾಯಿತು. ಈತ ಸಾಳುವ ಇಮ್ಮಡಿ ನರಸಿಂಹನನ್ನು 1505 ರಲ್ಲಿ ಕೊಲೆ ಮಾಡಿಸಿದ. 

ಭುಜಬಲ ನರಸಿಂಹ (1503-09) ಸಮರ್ಥನಾದ ದೊರೆಯಾಗಿದ್ದ. ಆದರೆ ಈತನ ಆಳ್ವಿಕೆಯ ಹೆಚ್ಚಿನ ಕಾಲ ಸಾಮ್ರಾಜ್ಯದಲ್ಲಿಯ ಬಂಡಾಯಗಳನ್ನು ಬಗ್ಗು ಬಡಿಯುವುದರಲ್ಲೇ ಕಳೆಯಿತು. ಈತನ ಕೊನೆಗಾಲದಲ್ಲಿ ಇವನ ಸೋದರ (ನರಸನ ರಾಣಿ ನಾಗಲಂಬಿಕೆಯ ಮಗ) ಕೃಷ್ಣದೇವರಾಯ ಜಂಟಿ ಅರಸನಾಗಿದ್ದ. ಆದರೆ ತನ್ನ ಕೊನೆಗಾಲದಲ್ಲಿ, ತನ್ನ ಎಳೆಯ ಮಗನನ್ನೇ ಪಟ್ಟಕ್ಕೇರಿಸಬೇಕೆಂದು ಇವನು ಮಾಡಿದ ಹಂಚಿಕೆಯನ್ನು ಮಂತ್ರಿ ಸಾಳುವ ತಿಮ್ಮ ವ್ಯರ್ಥಗೊಳಿಸಿದ. ಕೃಷ್ಣದೇವರಾಯನಿಗೆ 1509 ರಲ್ಲಿ ಪಟ್ಟವಾಯಿತು. 

ಕೃಷ್ಣದೇವರಾಯ (1509-29) ತುಳುವ ವಂಶದ ಗಣ್ಯ ಅರಸನಷ್ಟೇ ಅಲ್ಲ, ಸಾಮ್ರಾಜ್ಯದ ಅಗ್ರಗಣ್ಯ ಸಾಮ್ರಾಟನೂ ದಕ್ಷಿಣ ಭಾರತದಲ್ಲೇ ಶ್ರೇಷ್ಠ ದೊರೆಯೂ ಆಗಿದ್ದ. ವೀರನೂ ಕವಿಯೂ ಲಲಿತ ಕಲೆಗಳಲ್ಲಿ ಪರಿಣತನೂ ಪಂಡಿತಜನಾಶ್ರಯನೂ ಸಮರ್ಥ ಆಡಳಿತಗಾರನೂ ಆದ ಈತ ತನ್ನ ಆರು ವರ್ಷದ ಮಗ ತಿರುಮಲನನ್ನು ಪಟ್ಟಕ್ಕೇರಿಸಿದ. (1524), ಕೆಲವೇ ತಿಂಗಳಲ್ಲಿ ಈ ರಾಜಪುತ್ರ ತೀರಿಕೊಂಡ. ಕೊನೆಗೆ ಸಿಂಹಾಸನವನ್ನು ತನ್ನ ಸೋದರ (ನರಸನ ರಾಣಿ ಓಬಾಂಕಿಯ ಮಗ)ಅಚ್ಯುತನಿಗೆ ನೀಡಲು ತಿಳಿಸಿ ರಾಯತೀರಿಕೊಂಡ. ಅಚ್ಯುತನೂ ಸಮರ್ಥನಾದ ದೊರೆಯೇ (1529-42). ಆದರೂ ಸಾಮ್ರಾಜ್ಯದಲ್ಲಿಯ ಅಂತರ್ಬಾಹ್ಯ ಸಂಕಟಗಳಿಂದ ಸದಾ ಅವಿಶ್ರಾಂತನಾಗಿ ಉಳಿಯಬೇಕಾಯಿತು. ಈತನ ಅನಂತರ ಇವನ ಮಗ ವೆಂಕಟನಿಗೆ ಪಟ್ಟವಾದರೂ ಕೆಲವೇ ದಿನಗಳಲಿ ಅಚ್ಯುತನ ಭಾವಮೈದುನ ಸಕಲರಾಜು ತಿಮ್ಮರಜು ವೆಂಕಟನ ಕೊಲೆ ಮಾಡಿದ. ಮುಂದೆ ಪಟ್ಟಕ್ಕಾಗಿ ನಡೆದ ಅಂತ:ಕಲಹದಲ್ಲಿ ಅಚ್ಯುತನ ಸೋದರ ರಂಗನ ಮಗ ಸದಾಶಿವ ಅಳಿಯ ರಾಮರಾಯನ ನೆರವಿನಿಂದ ಪಟ್ಟವೇರಿದ (1543). ಆದರೆ ಸದಾಶಿವ ಹೆಸರಿಗೆ ಮಾತ್ರ ಅರಸನಾಗಿದ್ದ. ರಾಜ್ಯ ಕಾರಭಾರವನ್ನೆಲ್ಲ ಅರವೀಡು ವಂಶದ ಅಳಿಯ ರಾಮರಾಯನೂ ಮುಂದೆ 1565 ರಲ್ಲಿ ಅವನು ರಕ್ಕಸತಂಗಡಿಯಲ್ಲಿ ಕೊಲ್ಲಲ್ಪಟ್ಟಾಗ ಆತನ ಸೋದರಳಿಯ ತಿರುಮಲನೂ ನಡೆಸುತ್ತಿದ್ದರು. ಅಳಿಯ ರಾಮರಾಯ ಹಾಗೂ ತಿರುಮಲರು ಕೃಷ್ಣದೇವರಾಯನ ಜಾಮಾತರಾಗಿದ್ದರು. ರಾಮರಾಯ ತಿರುಮಲಾಂಬೆಯನ್ನೂ ತಿರುಮಲ ವೆಂಗಳಾಂಬೆಯನ್ನೂ ವರಿಸಿದ್ದರು. ವೆಂಗಳಾಂಬೆ ಕೃಷ್ಣದೇವರಾಯನ ಸೋದರನ ಪುತ್ರಿಯೆಂಬ ಒಂದು ಹೇಳಿಕೆಯೂ ಇದೆ. 

ನಾಮಮಾತ್ರ ಅರಸಾಗಿ ಇದ್ದ ತುಳುವ ಸದಾಶಿವ 1565 ರ ಅನಂತರ ಪೆನುಕೊಂಡ ರಾಜಧಾನಿಯಿಂದ ಆಳುತ್ತಿದ್ದು, 1570 ರಲ್ಲಿ ತಿರುಮಲದ ಪುತ್ರ ವೆಂಕಟನಿಂದ ಕೊಲೆಗೆ ಈಡಾದ. ಅಲ್ಲಿಗೆ ತುಳುವ ವಂಶದ ಆಳ್ವಿಕೆ ಮುಗಿಯಿತು. 
(ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ